ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ಅಧ್ಯಾಪಕರ ಕುರಿತು ಮಾಹಿತಿ:
ಪ್ರೊ. ವೆಂಕಟೇಶಪ್ಪ ಸರ್
ಸಾಹಿತ್ಯ ಎಂಬುದು ಹಲವಾರು ಬದುಕು-ಬವಣೆಗಳು, ಏಳು ಬೀಳುಗಳು, ವ್ಯಥೆಗಳು, ಕತೆಗಳು, ನೈಜ ಜೀವನ ದೃಷ್ಠಾಂತಗಳ ಚಿತ್ರಣ.
ಒಬ್ಬ ನಾಗರಿಕ ಸೇವಾ ಅಧಿಕಾರಿ, ತನ್ನ ವೃತ್ತಿ ಜೀವನದ್ದುದ್ದಕ್ಕೂ ಕಾಣಬಹುದಾದ ಎಲ್ಲಾ ವರ್ಗದ ಜನರ ಕಷ್ಟ-ಕಾರ್ಪಣ್ಯಗಳ ಸಂಘರ್ಷದ ಒಟ್ಟಾರೆ ಸಮೀಕರಣವನ್ನು ಒಳಗೊಂಡ ಒಂದು ದೊಡ್ಡ ಉಗ್ರಾಣ.
ಕನ್ನಡ ಭಾಷಾ ಸಾಹಿತ್ಯದ ಶ್ರೇಷ್ಠತೆ, ಧೀಮಂತತೆ, ಪ್ರತಿಯೊಬ್ಬರಿಗೂ ತಿಳಿದೇ ಇದೆ.ಯಾವುದೇ ಒಬ್ಬ ವ್ಯಕ್ತಿಗೆ, ಅವನ ಸರ್ವತೋಮುಖ ಏಳ್ಗೆಯಲ್ಲಿ ತಾಯ್ನುಡಿ, ಮಾತೃಭಾಷೆಯು ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಏಕೆಂದರೆ, ನಾವೆಲ್ಲಾ ತಿಳಿದಿರುವ ಹಾಗೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ, ಒಂದು ಮಗುವಿಗೆ ಮಾತೃಭಾಷೆಯ ಪರಿಚಯವು “ಅಮ್ಮ” ಎಂಬ ಪದದಿಂದಲೇ ಪ್ರಾರಂಭವಾಗುತ್ತದೆ. ಇದರೊಂದಿಗೆ ಮಗುವು ತನ್ನ ಸುತ್ತಮುತ್ತಲಿನ ವಸ್ತುಗಳು, ಸಂಬಂಧಗಳು, ಭಾವನೆಗಳನ್ನು ಗುರುತಿಸುತ್ತಾ, ಅರ್ಥೈಸಿಕೊಳ್ಳುತ್ತಾ ಹೋಗುತ್ತದೆ. ಅಂದರೆ ಒಂದು ಮಾತೃಭಾಷೆಯು ವ್ಯಕ್ತಿಯ ಗ್ರಹಿಕೆ, ಕಲಿಕೆ, ಅಭಿವ್ಯಕ್ತತೆ, ಚಿಂತನೆ, ಸ್ಪಂದನೆ, ವೈಚಾರಿಕತೆ, ನೈಪುಣ್ಯತೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ಹೂ ಅರಳಿದಂತೆ ಸಹಜವಾಗಿ ವ್ಯಕ್ತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕನ್ನಡವು ಸುಧೀರ್ಘ ಇತಿಹಾಸವನ್ನು ಹೊಂದಿದ್ದು, ಇನ್ನೂ ವಿಕಸನಗೊಳ್ಳುತ್ತಿರುವ ಅತ್ಯಂತ ಶ್ರೀಮಂತ ಸಾಹಿತ್ಯವನ್ನು ಹೊಂದಿದೆ. ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯದ ಇತಿಹಾಸ, ಕನ್ನಡ ಭಾಷೆಯ ಇತಿಹಾಸ, ವಚನ ಸಾಹಿತ್ಯ, ದಾಸ ಸಾಹಿತ್ಯ, ವಿಮರ್ಶೆ, ಹಳಗನ್ನಡ, ನಡುಗನ್ನಡ, ನವೋದಯ ಮತ್ತು ನವ್ಯ ಸಾಹಿತ್ಯ, ಜನಪದ ಸಾಹಿತ್ಯವನ್ನು ಒಳಗೊಂಡ ಎರಡು ಪತ್ರಿಕೆಗಳನ್ನು ಕನ್ನಡ ಸಾಹಿತ್ಯ ಐಚ್ಛಿಕ ಪತ್ರಿಕೆಯು ಹೊಂದಿದೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ಐಚ್ಛಿಕ ಪತ್ರಿಕೆಯನ್ನು ಏಕೆ ಆಯ್ಕೆ ಮಾಡಬೇಕು?
ಕನ್ನಡವು ಮಾತೃಭಾಷೆಯಾಗಿರುವುದರಿಂದ ತಿಳಿದ ವಿಚಾರಗಳನ್ನು, ಬದುಕಿನ ಅನುಭವಗಳ ವಿಶ್ಲೇಷಣೆಯನ್ನು ಮತ್ತು ಭಾವನೆಗಳನ್ನು ಸಹಜವಾಗಿ ವ್ಯಕ್ತಪಡಿಸಬಹುದು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸುವ ವಿಷಯಗಳಲ್ಲಿ ಸಾಹಿತ್ಯವೂ ಒಂದು. ಹಾಗೂ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡುವುದರಿಂದ ಕರ್ನಾಟಕದ ಸ್ಪರ್ಧಾರ್ಥಿಗಳೊಡನೆ ಮಾತ್ರ ಸ್ಪರ್ಧೆ ಇರುತ್ತದೆ.
ಸಾಹಿತ್ಯ ಮತ್ತು ಅದಕ್ಕೆ ಸಂಬಂಧಿಸಿದ ಭಾಷೆಯನ್ನು ಅಧ್ಯಯನ ಮಾಡುವುದರಿಂದ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಾಗುತ್ತದೆ. ಬದುಕಿನ ಸಮಸ್ಯೆಗಳನ್ನು ಎದುರಿಸಲು ಬೇಕಾದ ಮನೋಸ್ಥೈರ್ಯವನ್ನು ಸಾಹಿತ್ಯವು ತಂದುಕೊಡುತ್ತದೆ
ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಜನಸಂಪರ್ಕ ಹೆಚ್ಚಿರುವುದರಿಂದ ಬರಬಹುದಾದ ಸಮಸ್ಯೆಗಳನ್ನು ಎದುರಿಸಲು, ಮನೋಸ್ಥೈರ್ಯ, ವಾಕ್ ಚಾತುರ್ಯ ಮತ್ತು ಅನುಭವಗಳ ಒತ್ತಾಸೆಯನ್ನು, ನೈತಿಕ ಸ್ಥೈರ್ಯವನ್ನು ಸಾಹಿತ್ಯ ನೀಡುತ್ತದೆ.
ವಿಚಾರ ಲಹರಿಯ ಪರಿಧಿಯ ವಿಸ್ತರಣೆಗೆ ಅವಕಾಶ ಮಾಡಿಕೊಡುವುದರ ಜೊತೆಗೆ, ಜಗತ್ತನ್ನು ನೋಡುವ ದೃಷ್ಠಿಕೋನವನ್ನು ಬದಲಾಯಿಸುತ್ತದೆ.